ಪರ್ಸೆಪಲಿಸ್
ಪ್ರಾಚೀನ ಇರಾನಿನ ಅಕಿಮೆನಿಯನ್ ರಾಜಧಾನಿ. ಹಳೆ ಪರ್ಷಿಯನ್ ಭಾಷೆಯಲ್ಲಿ ಇದು ಪಾರ್ಸಾ ಎನಿಸಿಕೊಂಡಿತ್ತು. ಈಗ ಈ ನಿವೇಶನಕ್ಕೆ ತಖ್ತ್-ಎ-ಜಮ್ಷಿದ್ ಎಂಬ ಹೆಸರಿದೆ. ಜಮ್ಷಿದನ ಸಿಂಹಾಸನ ಎಂದು ಇದರ ಅರ್ಥ. ಇವನು ಪರ್ಷಿಯದ ಪೌರಾಣಿಕ ವೀರ. ಇರಾನಿನ ನೈಋತ್ಯಕ್ಕಿರುವ ಫಾರ್ಸ್ ಪ್ರಾಂತ್ಯದಲ್ಲಿ ಷಿರಾಜ್óಕನ ಈಶಾನ್ಯಕ್ಕೆ 51 ಕಿಮೀ. ದೂರದಲ್ಲಿ ಪುಲ್ವಾರ್ ಹಾಗೂ ರೂದ್-ಎ-ಕೊರ್ ನದಿಗಳ ಸಂಗಮದ ಬಳಿ ಈ ನಿವೇಶನವಿದೆ. ಇಲ್ಲಿ ಕೆಲವು ಪ್ರಾಗೈತಿಹಾಸಿಕ ಅವಶೇಷಗಳು ದೊರಕಿವೆ. ಕೆಲವು ಅಮೂಲ್ಯ ಶಾಸನಗಳೂ ಸಿಕ್ಕಿವೆ. ಕ್ರಿ.ಪೂ 522-486ರಲ್ಲಿ ಆಳಿದ 1ನೆಯ ಡೇರಿಯಸ್ ಪರ್ಸೆಪಲಿಸ್ ನಗರದ ನಿರ್ಮಾಣ ಕಾರ್ಯವನ್ನಾರಂಭಿಸಿದ ಅನಂತರ ಅವನು ರಾಜಧಾನಿಯನ್ನು ಪಸಾರ್ಗಡಿಯಿಂದ ಇಲ್ಲಿಗೆ ಬದಲಾಯಿಸಿದ. ಪರ್ಷಿಯದ ರಾಜಧಾನಿಯಾಗಿ ಪರ್ಸೆಪಲಿಸ್ ಮರೆಯಿತು. ಆದರೆ ಸ್ಥಿರವಾಗಿ ವಾಸಿಸಲು ಇದು ಅಷ್ಟೊಂದು ಅನುಕೂಲಕರವಾಗಿರಲಿಲ್ಲ. ಪರ್ವತಮಯ ನಿರ್ಜನ ಪ್ರದೇಶದಲ್ಲಿದ್ದ ಈ ನಗರದಲ್ಲಿ ವಸಂತಮಾಸದಲ್ಲಿ ಮಾತ್ರ ಜನವಸತಿಯಿದ್ದಂತೆ ತೋರುತ್ತದೆ.
ಅಲೆಗ್ಸಾಂಡರ್ ಕ್ರಿ.ಪೂ 330ರಲ್ಲಿ ಏಷ್ಯ ಮೈನರನ್ನು ಆಕ್ರಮಿಸುವ ವರೆಗೂ ಗ್ರೀಕರಿಗೂ ಈ ನಗರದ ಪರಿಚಯ ಇರಲಿಲ್ಲವೆಂದು ಹೇಳಲಾಗಿದೆ. ಅಲೆಗ್ಸಾಂಡರ್ ಕ್ರಿ.ಪೂ 330ರಲ್ಲಿ ಪರ್ಸೆಪಲಿಸ್ ನಗರವನ್ನು ಕೊಳ್ಳೆಹೊಡೆದ. ಜóಕ್ರ್ಸಿಸನ ಅರಮನೆಯನ್ನು ಸುಟ್ಟುಹಾಕಿದ. ಕ್ರಿ. ಪೂ 316ರಲ್ಲಿ ಕೂಡ ಇದೆ. ಮ್ಯಾಸಡೋನಿಯ ಸಾಮ್ರಾಜ್ಯದ ಪ್ರಾಂತ್ಯವಾದ ಪರ್ಸಿಸ್‍ನ ರಾಜಧಾನಿಯಾಗಿತ್ತು. ಸಿಲ್ಯೂಸಿಡ್ ಆಳ್ವಿಕೆಯ ಕಾಲದಲ್ಲೂ ಅನಂತರವೂ ಇದು ಅವನತಿ ಹೊಂದಿತು. ಈಗ ಅಲ್ಲಿ ಕಂಡು ಬರುವ ಪ್ರಾಚ್ಯವಶೇಷಗಳು ಈ ನಗರದ ಗತವೈಭವಕ್ಕೆ ಮೂಕಸಾಕ್ಷಿಗಳಾಗಿವೆ.

ಭಗ್ನವಾಗಿರುವ ಪರ್ಸೆಪಲಿಸ್‍ನ ನಿವೇಶನದ ಒಂದು ಎತ್ತರದ ದಿಣ್ಣೆ. ಪೂರ್ವದಲ್ಲಿ ಇದು ಕೂಹ್-ಎ-ರಹಮತ್ ಗುಡ್ಡವನ್ನು ಒರಗಿದೆ. ಉಳಿದ ಮೂರು ಕಡೆ ಇರುವ ಗೋಡೆ 4 ಮೀಗಳಿಂದ 13 ಮೀ. ವೆರೆಗೆ ಎತ್ತರವಾಗಿದೆ. ಪೂರ್ವದ ಕಡೆ 111 ಮೆಟ್ಟಿಲುಗಳಿವೆ. ಇವನ್ನು ಹತ್ತಿ ಮೇಲಕ್ಕೆ ಬಂದರೆ ಎತ್ತರವಾದ ದಿಣ್ಣೆಯ ಪ್ರದೇಶದಲ್ಲಿ ಅನೇಕ ವಾಸ್ತುಕೃತಿಗಳ ಅವಶೇಷಗಳು ಕಾಣುತ್ತವೆ. ಹೊಳಪಾದ ಕಪ್ಪು-ಕಂದು ಬಣ್ಣದ ಶಿಲೆಯಲ್ಲಿ ನಿರ್ಮಿಸಿದ್ದ ಈ ಕಟ್ಟಡಗಳ ಭಾಗಗಳು ದೂರದಿಂದಲೇ ಗಮನ ಸೆಳೆಯುತ್ತವೆ. ದೊಡ್ಡ ದೊಡ್ಡ ಬಂಡೆಗಲ್ಲುಗಳನ್ನು ಗಾರೆ ಸಿಮೆಂಟು ಮರಳುಗಳಲ್ಲದೆ. ಜೋಡಿಸಿ ಕಟ್ಟಿದ ಬೃಹತ್ ವಾಸ್ತುಕಟ್ಟಡಗಳ ಅದ್ಭುತವಾದ ಸ್ತಂಭರಾಶಿಗಳಿವೆ. ಇವುಗಳ ಪೈಕಿ ಹದಿಮೂರು ಕಂಬಗಳು-ಡೇರಿಯಸನ ಆಸ್ಥಾನದವು-ಇನ್ನೂ ಹಾಗೆಯೇ ನಿಂತಿವೆ. ಇನ್ನೆರಡು ಕಂಬಗಳು ಮುಖಮಂಪಟದ ಭಾಗದಲ್ಲಿ ಉಳಿದಿವೆ. ಈ ಭಾಗವನ್ನು ಡೇರಿಯಸನ ಮಗನಾದ ಜûಕ್ರ್ಸಿಸ್ ಕಟ್ಟಿಸಿದ. ಈ ಎಲ್ಲ ಅವಶೇಷಗಳನ್ನು ಸೋತೂನ್ (ಸಾವಿರ ಕಂಬಗಳು) ಎಂದು ಕರೆಯಲಾಗಿದೆ.

ಡೇರಿಯಸ್ ಭವನದ ತಳಭಾಗದಲ್ಲಿ ಚಿನ್ನ ಹಾಗೂ ಬೆಳ್ಳಿಯ ಎರಡು ಫಲಕಗಳು 1933ರಲ್ಲಿ ದೊರೆತುವು. ಈ ಶಾಸನಪಟಗಳಲ್ಲಿ ಕ್ಯೂನಿಫಾರ್ಮ ಲಿಪಿಯ ಮೂರು ರೂಪಗಳನ್ನು ಕಾಣಬಹುದು. ಇವು ಪೂರ್ವ ಪರ್ಷಿಯನ್, ಎಲಾಮೈಟ್ ಹಾಗೂ ಬ್ಯಾಬಿಲೋನಿಯನ್ ಪ್ರಭೇದಗಳು. ಈ ಶಾಸನಗಳು ಪರ್ಷಿಯನ್ ಸಾಮ್ರಾಜ್ಯದ ಗಡಿರೇಖೆಗಳನ್ನು ದಾಖಲುಪಡಿಸುತ್ತವೆ. ಇವಲ್ಲದೆ 1ನೆಯ ಡೇರಿಯಸ್, ಜóಕ್ರ್ಸಿಸ್ ಮತ್ತು 3ನೆಯ ಆರ್ಟಗ್ಸಕ್ರ್ಸೀಸ್ ಕಾಲದ ಕೆಲವು ಶಿಲಾಶಾಸನಗಳೂ ಪರ್ಸೆಪಲಿಸ್‍ನಲ್ಲಿ ಸಿಕ್ಕಿವೆ. ಈ ಶಾಸನಾಧಾರಗಳಿಂದ ಇಲ್ಲಿಯ ವಾಸ್ತುಕೃತಿಗಳನ್ನು ನಿರ್ಮಿಸಿದವರನ್ನು ಹಾಗೂ ಇವುಗಳ ಕಾಲವನ್ನು ಕುರಿತು ನಿರ್ದಿಷ್ಟವಾಗಿ ತಿಳಿಯಲು ಸಾಧ್ಯವಾಗಿದೆ.

ಪರ್ಸೆಪಲಿಸ್‍ನ ದಕ್ಷಿಣಭಾಗದಲ್ಲಿರುವ ಕಟ್ಟಡವೇ ಅತ್ಯಂತ ಪ್ರಾಚೀನವಾದ್ದು. ಇಲ್ಲಿ ಡೇರಿಯಸನ ಪ್ರಸಿದ್ಧವಾದ ಪ್ರಾರ್ಥನೆಯೊಂದನ್ನು (ದೇವರೆ, ಈ ದೇಶವನ್ನು ವೈರಿಗಳಿಂದ, ಕ್ಷಾಮದಿಂದ ಹಾಗೂ ಅಸತ್ಯದಿಂದ ರಕ್ಷಿಸು) ಬರೆಯಲಾಗಿದೆ. ಅಲ್ಲದೆ ಪರ್ಷಿಯನ್, ಮೀಡಿಯನ್ ಹಾಗೂ ಎಲಾಮೈಟ್ ಅಧಿಕಾರಿಗಳ ಉಬ್ಬುಗೆತ್ತನೆಗಳನ್ನು ಇಲ್ಲಿ ನೋಡಬಹುದು. ಒಟ್ಟು 23 ದೃಶ್ಯಾವಳಿಗಳಲ್ಲಿ ಸಾಮ್ರಾಜ್ಯದ ದೂರಪ್ರದೇಶಗಳಿಂದ ಬಂದ ಪ್ರತಿನಿಧಿಗಳ ಚಿತ್ರಗಳಿವೆ. ರಾಷ್ಟ್ರೀಯ ಉತ್ಸವದಂದು ಇವರು ಕಾಣಿಕೆಯನ್ನು ಅರ್ಪಿಸುತ್ತಿರುವಂತೆ ಚಿತ್ರಿಸಲಾಗಿದೆ.

ತಖ್ತ್-ಎ-ಜಮಷಿದ್‍ನ ಹಿಂಭಾಗದಲ್ಲಿ (ಗುಡ್ಡದ ಬಳಿ) ಮೂರು ಸ್ಮಶಾನಗುಹೆಗಳನ್ನು ಕೊರೆಯಲಾಗಿದೆ. ಈ ಗುಹೆಗಳಲ್ಲಿ ಒಂದರ ದ್ವಾರ ಅಪೂರ್ಣ. ಇದು 3ನೆಯೆ ಡೇರಿಯಸನ ಗೋರಿ. ಉಳಿದವುಗಳಲ್ಲಿ ಉಬ್ಬುಗೆತ್ತನೆ ಶಿಲ್ಪಗಳಿವೆ. ಈ ಗೋರಿಗಳು ಅನುಕ್ರಮವಾಗಿ 2ನೆಯ ಮತ್ತು 3ನೆಯ ಆರ್ಟ್‍ಗ್ಸಕ್ರ್ಸೀಸರವು. ರಾಜರ ಶ್ಮಶಾನಸ್ಥಳದ ಈಶಾನ್ಯಕ್ಕೆ ಸುಮಾರು 13 ಕಿಮೀ. ದೂರದಲ್ಲಿ, ಎತ್ತರವಾದ ಶಿಲಾಪರ್ವತದ ಬಳಿ ಇನ್ನೊಂದು ಶ್ಮಶಾನಗುಹೆಯನ್ನು ಕೊರೆಯಲಾಗಿದೆ. ಇದನ್ನು ನಕ್ಷ್-ಎ-ರೊಸ್ತಮ್ (ರುಸ್ತಮನ ಚಿತ್ರ) ಎಂದು ಕರೆಯಲಾಗಿದೆ. ಇದು 1ನೆಯ ಡೇರಿಯಸ್‍ನ ಗೋರಿಯೆಂಬುದು ಇದರ ಬಳಿ ಇರುವ ಶಾಸನದಿಂದ ತಿಳಿದುಬರುತ್ತದೆ. ಇದು ಆತನ ಗುಣಾತಿಶಯಗಳನ್ನು ಹೇಳುತ್ತದೆ.

ಪರ್ಸೆಪಲಿಸ್‍ನ ವಾಸ್ತುಕೃತಿಗಳಲ್ಲಿ ಎರಡು ಹಂತಗಳನ್ನು ಗುರತಿಸಬಹುದು. ಕ್ರಿ.ಪೂ 528ರಿಂದ ಕ್ರಿ.ಪೂ. 450ರ ವರೆಗಿದು ಮೊದಲನೆಯ ಹಂತ. ಕ್ರಿ.ಪೂ. 450ರಿಂದ ಕ್ರಿ.ಪೂ. 330ರ ವರೆಗಿನ ಎರಡನೆಯ ಹಂತ. ಈ ಎರಡು ಹಂತಗಳಲ್ಲಿ ನಿರ್ಮಿಸಲಾದ ಕಟ್ಟಡಗಳಲ್ಲಿ ಮುಖ್ಯವಾಗಿ 3ನೆಯ ಆರ್ಟ್‍ಗ್ಸಕ್ರ್ಸೀಸನ ಅರಮನೆ, ಭಂಡಾರ, ಡೇರಿಯಸ್ ಮತ್ತು ಜóಕ್ರ್ಸೀಸರ ಸಭಾಭವನ, ಜóಕ್ರ್ಸೀಸರ ಮಹಾದ್ವಾರ, ನೂರು ಕಂಬಗಳ ಸಭಾಭವನ, ಕೋಟೆಗೋಡೆ, 2ನೆಯ ಮತ್ತು 3ನೆಯ ಆರ್ಟಗ್ಸಕ್ರ್ಸೀಸರ ಗುಹೆಗಳು (ಕೋಟೆಯ ಹೊರವಲಯದಲ್ಲಿ) ಇದ್ದುವು. ಇವುಗಳ ತಳಪಾಯ, ಕಂಬ ಮುಂತಾದ ಭಾಗಗಳು ಮಾತ್ರ ಈಗ ಉಳಿದಿವೆ. ಸಾಮ್ರಾಜ್ಯದ ನಾನಾಭಾಗಗಳಿಂದ ಬಂದ ವಾಸ್ತುಶಿಲ್ಪಿಗಳ ಕಲಾಪ್ರಾವೀಣ್ಯವನ್ನು ಇಲ್ಲಿ ಗುರುತಿಸಬಹುದು.		(ಎಚ್.ಆರ್.ಆರ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ